ಶಿರಸಿ
	ಭಾರತದ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಕಾರವಾರಕ್ಕೆ ಆಗ್ನೇಯದಲ್ಲಿರುವ ಈ ತಾಲ್ಲೂಕಿನ ಉತ್ತರದಲ್ಲಿ ಯಲ್ಲಾಪುರ ಮತ್ತು ಮುಂಡಗೋಡ, ಪಶ್ಚಿಮದಲ್ಲಿ ಅಂಕೋಲ, ನೈಋತ್ಯ ಮತ್ತು ದಕ್ಷಿಣದಲ್ಲಿ ಕುಮಟ ಮತ್ತು ಸಿದ್ದಾಪುರ ತಾಲ್ಲೂಕುಗಳೂ ಪೂರ್ವದಲ್ಲಿ ಹಾವೇರಿ ಜಿಲ್ಲೆಯ ಹಾನಗಲ್ಲು ತಾಲ್ಲೂಕೂ ಆಗ್ನೇಯದಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕೂ ಸುತ್ತವರಿದಿವೆ. ಸಂಪಖಂಡ, ಹುಲೇಕಲ್ಲು, ಶಿರಸಿ ಮತ್ತು ಬನವಾಸಿ ಈ ತಾಲ್ಲೂಕಿನ ಹೋಬಳಿಗಳು. ಒಟ್ಟು 226 ಗ್ರಾಮಗಳು ಇವೆ. ವಿಸ್ತೀರ್ಣ 2,017 ಚ. ಕಿಮೀ. ಜನಸಂಖ್ಯೆ 1,75,546.

	ತಾಲ್ಲೂಕಿನ ಪೂರ್ವಭಾಗ ಹೆಚ್ಚು ಸಮತಟ್ಟಾಗಿದ್ದು ಅಪರೂಪವಾಗಿ ಕೆಲವು ಗುಡ್ಡಗಳಿವೆ. ಮಧ್ಯಭಾಗದಲ್ಲಿ ಬೆಟ್ಟಗುಡ್ಡಗಳಿದ್ದು ವಿವಿಧ ವೃಕ್ಷಗಳಿಂದ ಕೂಡಿದೆ. ಸಹ್ಯಾದ್ರಿ ಬೆಟ್ಟಶ್ರೇಣಿಯ ಹತ್ತಿರ ಫಲವತ್ತಾದ ಭೂಮಿ ಇದ್ದು ತೋಟಗಳಿಂದ ಮತ್ತು ಸದಾ ಹಸುರಾಗಿರುವ ಕಾಡಿನಿಂದ ಕೂಡಿದೆ. ಬೇಸಗೆ ಮತ್ತು ಮಳೆಗಾಲದಲ್ಲಿ ಹವೆ ಉತ್ತಮವಾಗಿದ್ದು ಚಳಿಗಾಲ ಸಹ್ಯವೆನಿಸುವುದು. ತಾಲ್ಲೂಕಿನ ಪಶ್ಚಿಮ ಭಾಗದಲ್ಲಿ ಮಳೆ ಹೆಚ್ಚು. ವಾರ್ಷಿಕ ಸರಾಸರಿ ಮಳೆ 2,129 ಮಿಮೀ.

	ತಾಲ್ಲೂಕಿನ ಆಗ್ನೇಯದ ಎಲ್ಲೆಯಲ್ಲಿ ವರದಾನದಿ ಹರಿಯುತ್ತದೆ. ಶಿರಸಿಯ ಹತ್ತಿರ ಅಘನಾಶಿನಿ ನದಿ ಹುಟ್ಟಿ ಸ್ವಲ್ಪ ದೂರ ದಕ್ಷಿಣಾಭಿಮುಖ ವಾಗಿ ಹರಿದು ಸಿದ್ದಾಪುರ ತಾಲ್ಲೂಕನ್ನು ಪ್ರವೇಶಿಸಿ, ಪಶ್ಚಿಮಾಭಿಮುಖ  ವಾಗಿ ಕುಮಟ ತಾಲ್ಲೂಕು ಮುಖಾಂತರ ಅರಬ್ಬೀ ಸಮುದ್ರ ಸೇರುವುದು. ಶಾಲ್ಮಲಿ ನದಿ ಹಾಗೂ ಇತರ ಅನೇಕ ತೊರೆಗಳೂ ಸಾಕಷ್ಟು ಬಾವಿಗಳೂ ಇದ್ದು ತಾಲ್ಲೂಕು ಜಲಸಮೃದ್ಧಿಯಾಗಿದೆ. ಕಾಡುಗಳಲ್ಲಿ ಬೆಲೆಬಾಳುವ ಮರಗಳುಂಟು.

	ತಾಲ್ಲೂಕಿನ ಮಧ್ಯಭಾಗದಲ್ಲಿ ಕೆಂಪುಮಣ್ಣಿನ ಭೂ ಪ್ರದೇಶವಿದೆ. ಪೂರ್ವಕ್ಕೆ ಬಂದಂತೆ ಜಿಗುಟು ಕಪ್ಪುಮಣ್ಣು ಇದೆ. ಕಣಿವೆಗಳಲ್ಲಿ ಫಲವತ್ತಾದ ಜಂಬುಮಣ್ಣಿನ ಭೂಮಿ ಇದೆ. ಬತ್ತ, ಕಬ್ಬು, ಕೆಲವು ದ್ವಿದಳ ಧಾನ್ಯಗಳು, ಹರಳು ಇಲ್ಲಿನ ಬೆಳೆಗಳು. ಈ ತಾಲ್ಲೂಕಿನಲ್ಲಿ ತೋಟದ ವ್ಯವಸಾಯ ಹೆಚ್ಚು. ಅಡಕೆ, ಮೆಣಸು, ಏಲಕ್ಕಿ ಮತ್ತು ತೆಂಗು ತೋಟದ ಬೆಳೆಗಳು. ಇವುಗಳ ವ್ಯಾಪಾರಕ್ಕೆ ಶಿರಸಿ ಪ್ರಸಿದ್ಧ. ಹತ್ತಿರದ ವ್ಯಾಪಾರ ಕೇಂದ್ರಗಳಾದ ಹುಬ್ಬಳ್ಳಿ-ಧಾರವಾಡ, ಕಾರವಾರ, ಅಂಕೋಲ, ಕುಮಟ, ಸಿದ್ದಾಪುರ ಇವುಗಳೊಂದಿಗೆ ಉತ್ತಮ ರಸ್ತೆ ಸಂಪರ್ಕ ಪಡೆದಿದೆ. 

	ಈ ತಾಲ್ಲೂಕಿನ ಬನವಾಸಿ (ನೋಡಿ- ಬನವಾಸಿ) ಪ್ರಸಿದ್ಧ ಐತಿಹಾಸಿಕ ಸ್ಥಳ. ಇದು ಶಿರಸಿಗೆ ಆಗ್ನೇಯದಲ್ಲಿ 22 ಕಿಮೀ ದೂರದಲ್ಲಿದೆ. ಶಿರಸಿಯಿಂದ ಉತ್ತರದಲ್ಲಿ 19 ಕಿಮೀ ದೂರದಲ್ಲಿರುವ ಸೋಂದಾ  ಹಿಂದೆ ಸೋದೆ ಅರಸರ ರಾಜಧಾನಿಯಾಗಿತ್ತು. ಈ ತಾಲ್ಲೂಕಿನ ಸಹ್ಯಾದ್ರಿ ಶ್ರೇಣಿಯಲ್ಲಿ ಕಲ್ಯಾಣಿ ಶ್ರೇಣಿಭಾಗ ದೇವನಹಳ್ಳಿ ಮತ್ತು ಮಂಜುಗುಣಿ ಮಧ್ಯೆ ಇದ್ದು ಪೂರ್ವಕ್ಕೆ ಶಿರಸಿಯವರೆಗೂ ಹಬ್ಬಿದೆ. ಇದರ ಎತ್ತರ ಶಿಖರ ಭಾಗವೇ ಭೆಡಸಗಾಂವ ಗುಡ್ಡ. ಶಿರಸಿಯ ನೈಋತ್ಯಕ್ಕೆ ಸು. 34 ಕಿಮೀ ದೂರದಲ್ಲಿ ದೇವಿಮನೆ ಘಾಟ್ ಇದ್ದು ಕುಮಟದೊಂದಿಗೆ ಸಂಪರ್ಕ ಕಲ್ಪಿಸಿದೆ. ಶಿರಸಿಯ ಪಶ್ಚಿಮಕ್ಕೆ ಸು. 30 ಕಿಮೀ ದೂರದಲ್ಲಿ ವಡ್ಡಿಘಾಟ್ ಇದೆ. ಕುಮಟದೊಂದಿಗೆ ಸಂಪರ್ಕ ಕಲ್ಪಿಸುವ ಈ ಮಾರ್ಗದಲ್ಲಿ ದೇವನಹಳ್ಳಿ, ವಡ್ಡಿ ಶಿವಗವಿ ಮುಂತಾದ ಗ್ರಾಮಗಳಿವೆ.

	ಶಿರಸಿ ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ಕಾರವಾರ, ಅಂಕೋಲಗಳಿಗೆ ಆಗ್ನೇಯದಲ್ಲಿದೆ. ಜನಸಂಖ್ಯೆ 65,352. ಇಲ್ಲಿ ಬತ್ತ, ಮೆಣಸು, ಅಡಕೆ ಹಾಗೂ ಮಣ್ಣು ಪರೀಕ್ಷೆಯ ಸಂಶೋಧನಾ ಕೇಂದ್ರಗ ಳಿವೆ. ಅನಾನಸ್ ಹಣ್ಣು ಸಂಸ್ಕರಣಾ ಕೇಂದ್ರವಿದೆ. ಶಿರಸಿಗೆ 87 ಕಿಮೀ ದೂರದಲ್ಲಿ ಹಾವೇರಿ, 103 ಕಿಮೀ ದೂರದಲ್ಲಿ ಹುಬ್ಬಳ್ಳಿ ರೈಲ್ವೆ ನಿಲ್ದಾಣಗಳಿವೆ. ಶಿರಸಿ ನಗರಸಭಾ ಆಡಳಿತಕ್ಕೆ ಸೇರಿದೆ. ಇಲ್ಲಿಯ ಮಹಾಗಣಪತಿ ಹಾಗೂ ಮಾರಿಕಾಂಬಾ ದೇವಾಲಯ ಸುಪ್ರಸಿದ್ಧ. ಮೂರು ವರ್ಷಕ್ಕೊಮ್ಮೆ ಮಾರಿಕಾಂಬೆಯ ಜಾತ್ರೆ ವೈಭವದಿಂದ ಜರಗುತ್ತದೆ. ಶಿರಸಿ ಹಿಂದೆ ಸೋದೆ ಸಂಸ್ಥಾನದ ಆಡಳಿತಕ್ಕೆ ಸೇರಿತ್ತು (ಶಿರಸಿ ಪ್ರದೇಶಕ್ಕೆ ಸುಧಾಪುರ ಸೀಮೆ ಎಂಬ ಹೆಸರಿತ್ತೆಂದೂ ಹೇಳುವರು). ಸೋದೆಯ ಎರಡನೆಯ ದೊರೆ ರಾಮಚಂದ್ರನಾಯಕ (1598-1615) ತನ್ನ ಆಳಿಕೆಯ ಕಾಲದಲ್ಲಿ ಪ್ರಮುಖ ವ್ಯಾಪಾರ ಕೇಂದ್ರವಾದ ಈ ಊರಿನ ಸುತ್ತಲೂ ಮಣ್ಣಿನ ಕೋಟೆಯ ಗೋಡೆಗಳನ್ನು ಕಟ್ಟಿಸಿ ಈ ಊರಿಗೆ ಚನ್ನಪಟ್ಟಣ ಎಂಬ ಹೆಸರಿಟ್ಟಿದ್ದ.		
						(ಆರ್.ಜಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ